ಪುಷ್ಯಮಿತ್ರ ಶುಂಗ
ಕ್ರಿ.ಪೂ. ಸು. 187- ಕ್ರಿ.ಪೂ. 151. ಮೌರ್ಯ ವಂಶದ ಆಳ್ವಿಕೆಯನ್ನು ಕೊನೆಗೊಳಿಸಿ ಅಧಿಕಾರಕ್ಕೆ ಬಂದ ದೊರೆ. ಶುಂಗ ರಾಜವಂಶದ ಸ್ಥಾಪಕ. 36 ವರ್ಷಗಳ ಕಾಲ ಆಳಿದ. ಬ್ರಾಹ್ಮಣನಾಗಿ ಹುಟ್ಟಿದ ಈತ ಸೈನಿಕನಾಗಿ ಮೌರ್ಯವಂಶದ ಕೊನೆಯ ದೊರೆಯಾದ ಬೃಹದ್ರಥನ ಸೇನ್ಯಾಧಿಪತಿಯಾಗಿ, ಅವನನ್ನು ಕೊಂದು (ಕ್ರಿ.ಪೂ. 187) ಸಿಂಹಾಸನವೇರಿದ. ಈ ಸಂಗತಿಯನ್ನು ಬಾಣಕವಿ ಹರ್ಷಚರಿತ ಕೃತಿಯಲ್ಲಿ ಹೇಳಿದ್ದಾನೆ. ಇವನು ಅಧಿಕಾರಕ್ಕೆ ಬಂದ ಸಮಯದಲ್ಲಿ ಈತನ ರಾಜ್ಯ ಹಿಂದೆ ಮೌರ್ಯ ಸಾಮ್ರಾಜ್ಯದ ಅಧೀನದಲ್ಲಿದ್ದ ಕೆಲವು ಭಾಗಗಳನ್ನು ಮಾತ್ರ ಒಳಗೊಂಡಿತ್ತು; ಪಾಟಲೀಪುತ್ರ, ಅಯೋಧ್ಯ, ವಿದಿಶಾ, ಪಂಜಾಬಿನ ಜಲಂಧರ ಮತ್ತು ಸಾಕಲಗಳಿಂದ ಕೂಡಿತ್ತು. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಕೆಲವು ರಾಜ್ಯಗಳು ಸ್ವತಂತ್ರವಾಗಿದ್ದವು. ಪಾಟಲೀಪುತ್ರವೇ ರಾಜಧಾನಿಯಾಗಿ ಮುಂದುವರಿಯಿತು. ಪುಷ್ಯಮಿತ್ರನ ಮಗನೂ ಯುವರಾಜನೂ ಆಗಿದ್ದ ಅಗ್ನಿಮಿತ್ರ ವಿದಿಶಾದ ಪ್ರಾಂತ್ಯಾಧಿಕಾರಿಯಾಗಿದ್ದನೆಂಬ ಅಂಶ ಮಾಳವಿಕಾಗ್ನಿಮಿತ್ರ ಕೃತಿಯಿಂದ ತಿಳಿದುಬರುತ್ತದೆ. ಕೋಸಲಾದಲ್ಲಿ ಮತ್ತೊಬ್ಬ ಪ್ರಾಂತ್ಯಾಧಿಕಾರಿಯಿದ್ದ. ಅಗ್ನಿಮಿತ್ರನ ಪತ್ನಿಯ ಸಹೋದರ ವೀರಸೇನನಿಗೆ ನರ್ಮದಾ ನದಿಯ ತೀರದಲ್ಲಿದ್ದ ಒಂದು ಕೋಟೆಯ ಸಂರಕ್ಷಣೆಯ ಕಾರ್ಯವನ್ನು ವಹಿಸಿಕೊಡಲಾಗಿತ್ತು. ಮೌರ್ಯರ ಆಳ್ವಿಕೆಯ ಕೊನೆಯ ದಿನಗಳಲ್ಲಿ ವಿದರ್ಭದ ಮಾಂಡಲಿಕನಾಗಿದ್ದ ಯಾಜ್ಞಸೇನ ಎಂಬವನು ಶುಂಗರ ಆಳ್ವಿಕೆ ಸ್ಥಾಪನೆಯಾದ ಕೂಡಲೇ ಪುಷ್ಯಮಿತ್ರನ ಆಡಳಿತವನ್ನೊಪ್ಪದೆ ಸ್ವತಂತ್ರನಾದ. ಯಾಜ್ಞಸೇನನನ್ನು ಅಗ್ನಿಮಿತ್ರ ಸೋಲಿಸಿ ವಿದರ್ಭದ ಮೇಲೆ ಶುಂಗರ ಆಡಳಿತವನ್ನು ಸ್ಥಾಪಿಸಿದನೆಂಬುವುದಾಗಿ ಮಾಳವಿಕಾಗ್ನಿಮಿತ್ರ ನಾಟಕದಿಂದ ತಿಳಿದುಬರುತ್ತಿದೆ.

ಆಗ್ನೇಯದಿಂದ ಖಾರವೇಲನ ಆಕ್ರಮಣಗಳನ್ನೂ ಉತ್ತರದಿಂದ ಗ್ರೀಕರ ದಾಳಿಗಳನ್ನೂ ಪುಷ್ಯಮಿತ್ರ ಎದುರಿಸಬೇಕಾಯಿತು. ಪುಷ್ಯಮಿತ್ರ ಖಾರವೇಲನನ್ನು ಸೋಲಿಸಿದ. ಪುಷ್ಯಮಿತ್ರನ ಮಗ ಅಗ್ನಿಮಿತ್ರನೂ ಮೊಮ್ಮಗ ವಸುಮಿತ್ರನೂ (ವಾಸುದೇವ) ಗ್ರೀಕ್ ಆಕ್ರಮಣಕಾರರ ವಿರುದ್ಧ ಕಾರ್ಯಾಚರಣೆ ನಡೆಸಿದರು. 

ಅಶೋಕನ ಕಾಲದಲ್ಲಿ ಹೀನದೆಶೆಗೆ ಬಂದಿದ್ದ ಸಾಂಪ್ರದಾಯಿಕ ಹಿಂದೂ ಮತಕ್ಕೆ ಪುಷ್ಯಮಿತ್ರ ಪುನಃ ಉತ್ತೇಜನ ನೀಡಿದ. ಅಶೋಕ ಚಕ್ರವರ್ತಿಯ ಕಾಲದಲ್ಲಿ ಬಹಿಷ್ಕರಿಸಲಾಗಿದ್ದ ಯಜ್ಞಯಾಗಾದಿಗಳಿಗೆ ಮತ್ತು ಪ್ರಾಣಿವಧೆಗೆ ಪ್ರೋತ್ಸಾಹ ದೊರಕಿತು. ಸಂಸ್ಕøತ ಮತ್ತೆ ಆಸ್ಥಾನ ಭಾಷೆಯಾಯಿತು. ಸುಪ್ರಸಿದ್ಧ ವೈಯಾಕರಣಿ ಪತಂಜಲಿ ಇವನ ಕಾಲದವನು. ಅಶ್ವಮೇಧಯಾಗಕ್ಕೆ ಅವನೇ ಪುರೋಹಿತನಾಗಿದ್ದನೆನ್ನಲಾಗಿದೆ. ಪುಷ್ಯಮಿತ್ರ ಎರಡು ಅಶ್ವಮೇಧಯಾಗಗಳನ್ನು ನಡೆಸಿದ. ಕೆಲವು ಬೌದ್ಧಗ್ರಂಥಗಳು ಇವನು ಬೌದ್ಧಮತದ ಅನುಯಾಯಿಗಳನ್ನು ಉಗ್ರವಾಗಿ ಶಿಕ್ಷಿಸಿದನೆಂದೂ ಅನೇಕ ಬೌದ್ಧಮಠಗಳನ್ನು ನಾಶಪಡಿಸಿದನೆಂದೂ ವರ್ಣಿಸುತ್ತವೆ. ಪಾಟಲೀಪುತ್ರದಲ್ಲಿ ಅಶೋಕನಿಂದ ನಿರ್ಮಿತವಾಗಿದ್ದ ಕುಕ್ಕುಟಾರಾಮ ಬೌದ್ಧಮಠವನ್ನು ಧ್ವಂಸ ಮಾಡಲು ಪ್ರಯತ್ನಿಸಿದನೆಂದೂ ವಿವರಿಸಲಾಗಿದೆ. ಇವನು ಬೌದ್ಧಮತಾವಲಂಬಿಗಳನ್ನು ಹಿಂಸೆಗೆ ಗುರಿಪಡಿಸಿದನೆಂಬುದಕ್ಕೆ ಸಾಕಷ್ಟು ಐತಿಹಾಸಿಕ ಆಧಾರಗಳಿಲ್ಲವೆನ್ನಲಾಗಿದೆ. ಪುಷ್ಯಮಿತ್ರನ ಅನಂತರ ಅಗ್ನಿಮಿತ್ರ ಸಿಂಹಾಸನವನ್ನೇರಿದ.			  (ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ